ಕಾಲೊರಾಡೋ 

 ಅಮೆರಿಕ ಸಂಯುಕ್ತ ಸಂಸ್ಥಾನದ 38ನೆಯ ರಾಜ್ಯ. ಅಮೆರಿಕ ಸ್ವಾತಂತ್ರ್ಯ ಘೋಷಿಸಿಕೊಂಡು 100 ವರ್ಷಗಳು ಆಗಿದ್ದಾಗ ಆ ಒಕ್ಕೂಟವನ್ನು ಸೇರಿಕೊಂಡದ್ದರಿಂದ ಇದಕ್ಕೆ ಶತಾಬ್ದಿ ರಾಜ್ಯವೆಂದು ಹೆಸರು ಬಂದಿದೆ. ವಿಸ್ತೀರ್ಣದ ದೃಷ್ಟಿಯಲ್ಲಿ  ಇದು ಒಕ್ಕೂಟದ 8ನೆಯ ರಾಜ್ಯ. ಸಮುದ್ರ ಮಟ್ಟದಿಂದ 6,800' ಎತ್ತರದಲ್ಲಿರುವ ಈ ರಾಜ್ಯ ಈ ದೇಶದಲ್ಲಿ ಅತ್ಯುನ್ನತವಾದ್ದು, ಉತ್ತರದಲ್ಲಿ ವೀಯೋಮಿಂಗ್ ಮತ್ತು ನೆಬ್ರಾಸ್ಕ, ಪೂರ್ವದಲ್ಲಿ ನೆಬ್ರಾಸ್ಕ ಮತ್ತು ಕ್ಯಾನ್ಸಾಸ್, ದಕ್ಷಿಣದಲ್ಲಿ  ಓಕ್ಲಹೋಮ ಮತ್ತು ನ್ಯೂ ಮೆಕ್ಸಿಕೋ, ಪಶ್ಚಿಮದಲ್ಲಿ ಯೂಟಾ-ಇವು ಇದರ ಮೇರೆಗಳು. ವಿಸ್ತೀರ್ಣ 1,04,247 ಚ.ಮೈ. ರಾಜಧಾನಿ ಡೆನ್‍ವರ್.

(ಸಿ.ಎಂ.)

 ಭೌಗೋಳಿಕವಾಗಿ ಕಾಲೋರಾಡೋದಲ್ಲಿ ಮೂರು ಪ್ರತ್ಯೇಕ ವಿಭಾಗಗಳಿವೆ. ಪೂರ್ವದ ಮೈದಾನಪ್ರದೇಶ, ರಾಕಿ ಪರ್ವತಗಳನ್ನೊಳಗೊಂಡ ಮಧ್ಯಪರ್ವತ ಪ್ರದೇಶ ಮತ್ತು ಕಣಿವೆ, ಪ್ರಸ್ಥಭೂಮಿಗಳ ಪಶ್ಚಿಮಭಾಗ. ರಾಜ್ಯದ ಸರಾಸರಿ ಎತ್ತರ ಸಮುದ್ರಮಟ್ಟದಿಂದ 6,800'. ಅತ್ಯುನ್ನತ ಶಿಖರ ಎಲ್ಬರ್ಟ್ (14,431'). 14,000'ಗಿಂತ ಎತ್ತರದ 55 ಶಿಖರಗಳನ್ನು ಗುರುತಿಸಿ ಹೆಸರಿಸಲಾಗಿದೆ. ಇಲ್ಲಿಯ ಮುಖ್ಯ ನದಿಗಳು ಇವು: ಕಾಲೊರಾಡೋ-ರಾಕೀ ಪ್ರರ್ವತಗಳಲ್ಲಿ ಹುಟ್ಟಿ ಮುಖ್ಯ ಉಪನದಿಯೊಡನೆ ಸೇರಿ ಪ್ರಾಂತ್ಯದ ಪಶ್ಚಿಮ ಭಾಗದಲ್ಲಿ ಹರಿದು ಪೆಸಿಫಿಕ್ ಸಾಗರವನ್ನು ಸೇರುತ್ತದೆ. ರೀಯೊಗ್ರಾಂಡ್ ನದಿ ದಕ್ಷಿಣ-ಮಧ್ಯಭಾಗಗಳಲ್ಲಿ ಪ್ರವಹಿಸುತ್ತದೆ; ಅರ್ಕಾನ್ಸ್ ಅಗ್ನೇಯ ಭಾಗದಲ್ಲಿ ಹರಿಯುತ್ತದೆ; ಕೊನೆಯದಾಗಿ ದಕ್ಷಿಣ ಮತ್ತು ಉತ್ತರ ಪ್ಲ್ಯಾಟ್ ನದಿಗಳು ನೈಋತ್ಯ ಭಾಗದಲ್ಲಿ ಪ್ರವಹಿಸುತ್ತವೆ. ಇಲ್ಲಿಯ ವಾಯುಗುಣ ವೈವಿದ್ಯಪೂರ್ಣವಾದ್ದು. ಅತಿ ಹೆಚ್ಚಿನ ಉಷ್ಣತೆ 115o ಫ್ಯಾ., ಕನಿಷ್ಟ ಉಷ್ಣತೆ 54o ಫ್ಯಾ. ವಿವಿಧ ಪ್ರದೇಶಗಳಲ್ಲಿ ವಾಯುಗುಣದಲ್ಲಿ ಬಹಳ ಹೆಚ್ಚಿನ ಅಂತರಗಳಿರುತ್ತವೆ. ವಾರ್ಷಿಕ ಸರಾಸರಿ ಮಳೆ 16.2". ಸ್ಯಾನ್ ಲೂಯಿ ಕಣಿವೆ ಪ್ರದೇಶದಲ್ಲಿ 7"ಗಿಂತಲೂ ಕಡಿಮೆಯಾದರೆ ವಾಯವ್ಯ ಭಾಗದಲ್ಲಿ 27" ಮಳೆ ಬೀಳುತ್ತದೆ. ಗೆನಿಸನ್ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಹಿಮ ಬೀಳುತ್ತವೆ. ಇಲ್ಲಿ ಬೀಳುವ ವಾರ್ಷಿಕ ಸರಾಸರಿ ಹಿಮಪಾತ 38'. ಬೇಸಿಗೆಯಲ್ಲಿ ವಾಯುಗುಣ ಹಿತಕರವಾಗಿರುತ್ತದೆ. ಕಾಲೊರಾಡೋದ ಮಣ್ಣು ಬಹಳ ಫಲವತ್ತಾದ್ದು. ಹೆಚ್ಚು ಭಾಗ ಅರಣ್ಯ. ಇಡೀ ಸಂಯುಕ್ತಸಂಸ್ಥಾನದ 8% ಅರಣ್ಯಗಳು ಇಲ್ಲಿವೆ. ವರ್ಷಂಪ್ರತಿ 60,00,000 ಜನ ಇಲ್ಲಿಯ ಅರಣ್ಯಗಳನ್ನು ಸಂದರ್ಶಿಸುತ್ತಾರೆ. ಇಲ್ಲಿ ಸರ್ಕಾರದ 11 ರಕ್ಷಿತಾರಣ್ಯಗಳಿವೆ. ಅನೇಕ ರೀತಿಯ ಉಪಯುಕ್ತ ಮರಗಳು ಇಲ್ಲಿ ಬೆಳೆಯುತ್ತವೆ. ರಾಜ್ಯದ ಅರ್ಧಕ್ಕೂ ಹೆಚ್ಚು ಭಾಗ ಹುಲ್ಲುಗಾವಲು.

 ಎತ್ತರಕ್ಕನುಸಾರವಾಗಿ ಇಲ್ಲಿ ಸಸ್ಯಸಂಪತ್ತಿನಲ್ಲಿ ವೈವಿಧ್ಯವುಂಟು. ಸಸ್ಯಸಂಪತ್ತಿನ ಅಧಾರದ ಮೇಲೆ ಐದು ಭಾಗಗಳನ್ನು ಗುರುತಿಸಬಹುದು: 6,000' ಎತ್ತರದ ವರೆಗಿನ ಅಲ್ಪ ಮಳೆಯಾಗುವ ಪ್ರದೇಶ. 6,000'-8000' ಎತ್ತರದ ಅಡಿ ಪ್ರದೇಶ, 8,000'-10,000' ಎತ್ತರದ ಗುಡ್ಡಗಾಡು ಪ್ರದೇಶ, 10,000-11,500' ವರೆಗಿನ ಬೆಟ್ಟ ಪ್ರದೇಶ ಮತ್ತು 11,500' ಗೂ ಎತ್ತರದ ಪರ್ವತ ಪ್ರದೇಶ. ಈ ವಿಭಾಗಗಳ ಸಸ್ಯಗಳಲ್ಲಿ ವೈವಿಧ್ಯವೂ ಕಂಡುಬರುತ್ತದೆ.

 ಇಲ್ಲಿಯ ವೈದಾನ ಮತ್ತು ಅರಣ್ಯಗಳಲ್ಲಿ ಕಾಡೆಮ್ಮೆಗಳೂ ಜಿಂಕೆಗಳೂ ಹೇರಳವಾಗಿದ್ದುವು. ಈಗ ಜಿಂಕೆಗಳು ಮಾತ್ರ ಅಲ್ಪಸಂಖ್ಯೆಯಲ್ಲಿ ಉಳಿದುಕೊಂಡಿವೆ. ಪರ್ವತ ಪ್ರದೇಶಗಳಲ್ಲಿ ಸಿಂಹ ಮತ್ತು ಕರಡಿಗಳು ಈಗಲೂ ಅಲ್ಪಸಂಖ್ಯೆಯಲ್ಲಿ ಉಳಿದುಕೊಂಡಿವೆ. ಕರಿ ಕರಡಿ, ಕಂದುಬಣ್ಣದ ಕರಡಿ, ಮೊಂಡುಬಾಲದ ಬೆಕ್ಕು, ಕೆಂಪು ತೋಳ, ಬೀವರ್ ಮತ್ತು ಕಾಡುಹಂದಿಗಳು ಅಧಿಕವಾಗಿ ವಾಸಿಸುತ್ತವೆ. ರಾಷ್ಟ್ರೀಯ ಪಕ್ಷಿಯೆಂದು ಪರಿಗಣಿತವಾಗಿರುವ ಲಾರ್ಕ್‍ಬಂಟಿಂಗ್, ರಾಬಿನ್, ಮೈದಾನದ ಲಾರ್ಕ್ ಅಥವಾ ಬಾನಾಡಿ, ಮ್ಯಾಗ್‍ಪೈ ಮುಂತಾದ ಅನೇಕ ಜಾತಿಯ ಹಕ್ಕಿಗಳೂ ಗೂಬೆ, ಡೇಗೆ ಮುಂತಾದ ದುಷ್ಟಪಕ್ಷಿಗಳೂ ಹಲವು ಬಗೆಯ ಹದ್ದುಗಳೂ ಇಲ್ಲಿ ಕಾಣಬರುತ್ತವೆ. ಒಳಭಾಗದ ಸರೋವರಗಳಲ್ಲೂ ನದಿಗಳಲ್ಲೂ ಅನೇಕ ಜಾತಿಗಳ ಮೀನುಗಳಿವೆ. ಇಲ್ಲಿ ಊರಗ ಜಾತಿಗಳು ವಿರಳ: ಆಮೆ, ಹಾವು, ಹಲ್ಲಿಗಳು ಇವುಗಳಲ್ಲಿ ಮುಖ್ಯವಾದವು.

 ಕಾಲೊರಾಡೋರಲ್ಲಿ ಅಮೂಲ್ಯವಾದ ಮತ್ತು ಕೈಗಾರಿಕೆಗೆ ಉಪಯುಕ್ತವಾದ ಖನಿಜಸಂಪತ್ತು ಹೇರಳವಾಗಿದೆ. ಸು. 250 ಬಗೆಯ ಉಪಯುಕ್ತ ಖನಿಜಗಳನ್ನು ಅಗೆದು ತೆಗೆಯುತ್ತಾರೆ. ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಸಿಕ್ಕುವ ಮೊಲಿಬ್‍ಡೆನವಮ್ ಖನಿಜದ ಅಧಿಕಾಂಶ ದೊರೆಕುವುದು ಇಲ್ಲಿ. ಯುರೇನಿಯಂ. ರೇಡಿಯಂ.ಟಂಗ್ಸ್‍ಟನ್, ಚಿನ್ನ, ಸೀಸ, ತವರ, ಬೆಳ್ಳಿ ಸತು ಮುಂತಾದ ಅನೇಕ ಲೋಹಗಳು ಹೆಚ್ಚಾಗಿ ಉತ್ಪತ್ತಿಯಾಗುತ್ತವೆ. ಕಲ್ಲಿದ್ದಲು ಮತ್ತು ತೈಲಗಳ ವಿಚಾರದಲ್ಲಿ ಇಡೀ ರಾಷ್ಟ್ರಕ್ಕೆ ಇದು ಪ್ರಥಮ, ಚಿನ್ನ-ಬೆಳ್ಳಿಗಳ ಆಶೆಯಿಂದ ಜನ ಇಲ್ಲಿಗೆ ಮೊದಮೊದಲು ವಲಸೆ ಬರಲಾರಂಭಿಸಿದರು. 1859ರಲ್ಲಿ ಚಿನ್ನದ ನಿಕ್ಷೇಪವನ್ನು ಪತ್ತಹಚ್ಚಲಾಯಿತು, 1900ರ ವೇಳೆಗೆ 2,80,00,000 ಡಾಲರ್ ಮೌಲ್ಯದ ಚಿನ್ನ ಉತ್ಪತ್ತಿಯಾಗುತ್ತಿತ್ತು. ಡೆನ್ವರ್ ಬಳಿಯ ಕಣಿವೆಗಳು ಮತ್ತು ಕ್ರಿಪಲ್ ಕ್ರೀಕ್‍ಗಳಲ್ಲಿ ಪ್ರಮುಖ ಚಿನ್ನದ ನಿಕ್ಷೇಪಗಳಿವೆ. ಲೀಡ್ ಎಲ್, ಔರೆ, ಸಿಲ್ವರ್‍ಟನ್, ಕ್ರೀಡ್ ಮುಂತಾದವು ಬೆಳ್ಳಿ ಉತ್ಪಾದನ ಕೇಂದ್ರಗಳು. 1892ರಲ್ಲಿ 2,30,00,000 ಡಾಲರ್ ಮೌಲ್ಯದ ಬೆಳ್ಳಿಯನ್ನು ಉತ್ಪಾದಿಸಲಾಗಿತ್ತು. ಕ್ಯಾನನ್ ನಗರದ ಬಳಿ 1862ರಲ್ಲಿ ತೈಲ ಉತ್ಪಾದನೆ ಆರಂಭವಾಯಿತು. ರ್ಯಾಂಗ್ಲೀಯಲ್ಲಿ 1946ರಿಂದೀಚೆಗೆ ತೈಲೋತ್ಪಾದನೆಯಾಗುತ್ತಿದೆ. ಡೆನ್ವರ್-ಜ್ಯೂಲೆಸ್‍ಬರ್ಗ್ ಮತ್ತು ಸಾನ್‍ವಾನ್ ಇತರ ಪ್ರಮುಖ ತೈಲೋತ್ಪಾದನ ನೆಲೆಗಳು.

 ಕೃಷಿ ಇಲ್ಲಿಯ ಮುಖ್ಯ ಕಸಬು, ಧಾನ್ಯ, ಬಾರ್ಲಿ, ಓಟ್ಸ್, ಗೋದಿ, ಹಣ್ಣುಗಳು, ತರಕಾರಿಗಳು, ಆಲೂಗೆಡ್ಡೆ, ಸಕ್ಕರಬೀಟ್, ದನಗಳ ಮೇವು ಇವು ಪ್ರಮುಖ ಕೃಷಿ ಉತ್ಪನ್ನಗಳು. ಎಲ್ಲ ರೀತಿಯ ಬೇಸಾಯ ಪದ್ಧತಿಗಳೂ ಬಳಕೆಯಲ್ಲಿವೆ. ಪಶುಪಾಲನೆಯಿಂದ ಅಧಿಕ ವರಮಾನ ಬರುತ್ತದೆ. ರಾಜ್ಯದ ಒಟ್ಟು ಆದಾಯದಲ್ಲಿ 10%ರಷ್ಟು ವೈವಸಾಯದಿಂದ ದೊರಕುತ್ತಿದೆ. ಇದು ದೇಶದ ಜನಸಂಖ್ಯೆಯ 20%ರಷ್ಟು ಮಂದಿಗೆ ಉದ್ಯೋಗ ಕಲ್ಪಿಸಿದೆ. 1870ರ ವರೆಗೆ ಪಶುಪಾಲನೆ ಪ್ರಮುಖ ಕಸಬಾಗಿತ್ತು. ಅಲ್ಲಿ ದೊಡ್ಡ ಮಂದೆಗಳಿರುತ್ತಿದ್ದುವು. 1870ರ ದಶಕದಲ್ಲಿ ಕುರಿಪೋಷಣೆ ಪ್ರಾರಂಭವಾಯಿತು. ಇತ್ತೀಚೆಗೆ ಕಲವು ಪ್ರದೇಶದಲ್ಲಿ ಆಡುಗಳನ್ನು ಸಾಕುತ್ತಾರೆ.

 ನೀರಾವರಿ ಕೆಲಸಗಳು ಸಾಕಷ್ಟು ನಡೆದಿವೆ. 1860ರ ಸಮಾರಿನಿಂದ ಈ ದಿಕ್ಕಿನಲ್ಲಿ ಪ್ರಯತ್ನಗಳು ನಡೆದುವು. ಈಗ ಸು. 30,00,000 ಎಕರೆ ಜಮೀನಿಗೆ ನೀರಾವರಿ ಸೌಲಭ್ಯವುಂಟು. ಸಕ್ಕೆರೆ ಬೀಟ್ ಬೆಳೆ ನೀರಾವರಿ ಬೆಳೆಗಳಲ್ಲಿ ಮುಖ್ಯವಾದ್ದು. ನೀರಾವರಿ ಕೆಲಸಗಳಿಗಾಗಿ ರಾಜ್ಯವನ್ನು ಏಳು ವಲಯಗಳಾಗಿ ವಿಭಾಗಿಸಲಾಗಿದೆ. ಈಚೆಗೆ 7-8 ಕೇಂದ್ರಗಳಲ್ಲಿ ವಿದ್ಯುಚ್ಛಕ್ತಿಯನ್ನು ತಯಾರಿಸುತ್ತಿದ್ದರೂ ಅಷ್ಟೇನೂ ಹೆಚ್ಚಿಲ್ಲ. ಕೈಗಾರಿಕೋದ್ಯಮಗಳಲ್ಲಿ ಗಣಿಗಾರಿಕೆಗೆ ಪ್ರಥಮಸ್ಥಾನ. ಗಣಿ ಉದ್ಯಮಕ್ಕೆ ಬೇಕಾದ ಯಂತ್ರಸಾಮಗ್ರಿಗಳನ್ನೂ ತಯಾರಿಸಲಾಗುತ್ತಿದೆ. ಪ್ಯೂಬ್ಲೋ ನಗರದಲ್ಲಿರುವ ಕಾಲೊರಾಡೋ ಇಂಧನ ಮತ್ತು ಕಬ್ಬಿಣ ಸಂಸ್ಥೆ ದೇಶದ ಪಶ್ಚಿಮ ಭಾಗದಲ್ಲಿ ಅತ್ಯಂತ ಬೃಹತ್ ಉದ್ಯಮ. ಡೆನ್ವರ್‍ನಲ್ಲಿ ರಬ್ಬರ್ ಉತ್ಪಾದನೆಯಾಗುತ್ತದೆ. ಮಾಂಸ ಸಂವೇಷ್ಟನ ತಯಾರಿಕೆ, ಒಣಹಣ್ಣುಗಳನ್ನು ಡಬ್ಬಗಳಲ್ಲಿ ತುಂಬಿ ವ್ಯಾಪರಕ್ಕೆ ಸಿದ್ಧಗೊಳಿಸುವುದು-ಇವು ಇತರ ಪ್ರಮುಖ ಕೈಗಾರಿಕೆಗಳು, ರಾಜಧಾನಿ ಡೆನ್ವರ್ ಈ ರಾಜ್ಯದ ಪ್ರಮುಖ ಕೈಗಾರಿಕಾ ಕೇಂದ್ರ.

 ಬೆಟ್ಟಗುಡ್ಡಗಳ ಈ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಕಷ್ಟಸಾಧ್ಯ. ಅನೇಕ ಪ್ರಯೋಗಗಳಾದ ಮೇಲೆ 1870-80ರಿಂದ ಈಚೆಗೆ ಕೆಲವು ರಾಷ್ಟ್ರೀಯ ರೈಲುಮಾರ್ಗಗಳನ್ನು ನಿರ್ಮಿಸಲಾಗಿದೆ. ಇವು ಕೆಲವು ಖಾಸಗಿ ಸಂಸ್ಥೆಗಳಿಗೆ ಸೇರಿವೆ. ಡೆನ್ವರ್-ರೀಯೊಗ್ರಾಂಡ್, ಡೆನ್ವರ್-ಸಾಲ್ಟ್‍ಲೇಕ್, ಯೂನಿಯನ್-ಪೆಸಿಫಿಕ್ ಇವು ಪ್ರಮುಖ ಸಂಸ್ಥೆಗಳಾಗಿವೆ. 1914ರಲ್ಲಿದ್ದ ರೈಲುಮಾರ್ಗದ ಉದ್ದ 5,739 ಮೈ. 20ನೆಯ ಶತಮಾನದ ಮಧ್ಯಕಾಲದಲ್ಲಿದ್ದದ್ದು 3,800 ಮೈ, ಮಾತ್ರ, ಇದಲ್ಲದೆ 12,000 ಮೈ, ರಾಷ್ಟ್ರೀಯ ಹೆದ್ದಾರಿಗಳೂ 60,000 ಮೈ. ಸ್ಥಳೀಯ ರಸ್ತೆಗಳೂ ನಿರ್ಮಿತವಾಗಿವೆ. ಮೋಟಾರು ವಾಹನಗಳ ಇಂಧನ ಮತ್ತು ರಸ್ತೆನಿರ್ಮಾಣದ ಸಂಬಂಧವಾದ ತೆರಿಗೆಗಳಿಂದ ಈ ಶತಮಾನದ ಮಧ್ಯಭಾಗದಲ್ಲಿ 6,00,00,000 ಡಾಲರುಗಳ ವರಮಾನವಿತ್ತು. 1926ರಲ್ಲಿ ವಿಮಾನಸಾರಿಗೆ ಬಂತು, ಡೆನ್ವರ್ ಪ್ರಮುಖ ವಿಮಾನ ನಿಲ್ದಾಣ; ರಾಷ್ಟ್ರದಲ್ಲಿ ಏಳನೆಯದು. ಏಳು ಪ್ರಮುಖ ಸಂಸ್ಥೆಗಳ ವಿಮಾನಗಳು ಇಲ್ಲಿಗೆ ಬರುತ್ತವೆ.

 1860ರಲ್ಲಿ ಸಂಯುಕ್ತಸಂಸ್ಥಾನಗಳೊಡನೆ ಸೇರುವ ಮುನ್ನ ಕಾಲೊರಾಡೋದ ಜನಸಂಖ್ಯೆ 34,251 ಇದ್ದು, ಅದರಲ್ಲಿ 86.1%ರಷ್ಟು ಮಂದಿ ಗ್ರಾಮಪ್ರದೇಶಗಳಲ್ಲಿ ವಾಸಿಸುತ್ತಿದ್ದರು. 1880ರ ಸುಮಾರಿಗೆ ಇದು ಐದರಷ್ಟು ಹೆಚ್ಚಿತು. ಆಗಿನ ಜನಸಂಖ್ಯೆ 5,39,700 (51.7% ಗ್ರಾಮಸ್ಥರು). 1960ರಲ್ಲಿ ಒಟ್ಟು ಜನಸಂಖ್ಯೆ 17,53,947. 73.7% ರಷ್ಟು ಮಂದಿ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು. ಕಾಲೊರಾಡೋವಿನ ಜನತೆಯಲ್ಲಿ ವಿಶೇಷವಾಗಿ ಸ್ಥಳೀಯರೇ ಹೆಚ್ಚು. ವಲಸೆಗಾರರು ಬಹಳ ಕಡಿಮೆ. ನೀಗ್ರೋ ಜನಸಂಖ್ಯೆ 1%ರಷ್ಟು ಮಾತ್ರ.

 ವಿದ್ಯಾಭ್ಯಾಸ: ಈ ರಾಜ್ಯದಲ್ಲಿ ಮೊಟ್ಟಮೊದಲಿಗೆ ಡೆನ್ವರಿನ ಬಾಡಿಗೆ ಕಟ್ಟಡದಲ್ಲಿ ಜೆ. ಗೋಲ್ಡ್‍ರಿಕ್ 1859ರಲ್ಲಿ ಒಂದು ಶಾಲೆಯನ್ನು ಪ್ರಾರಂಭಿಸಿದ. 1860ರಲ್ಲಿ ಅದಕ್ಕಾಗಿ ಒಂದು ಮರದ ಮನೆಯನ್ನು ನಿರ್ಮಿಸಲಾಯಿತು. 1862ರಲ್ಲಿ ವಿದ್ಯಾಶುಲ್ಕ ವಿಧಿಸಿ ಶಾಲೆಗಳನ್ನು ನಡೆಸಲಾರಂಬಿಸಿದರು. ಡೆನ್ವರಿನಲ್ಲಿರುವ ಆಪರ್ಚುನಿಟಿ ಶಾಲೆ ರಾಷ್ಟ್ರದಲ್ಲೆಲ್ಲ ಪ್ರಸಿದ್ಧವಾದ್ದು. 20ನೆಯ ಶತಮಾನದಲ್ಲಿ ಇಲ್ಲಿ 7 ಸರ್ಕಾರಿ ವಿಶ್ವವಿದ್ಯಾಲಯಗಳೂ ಕಾಲೇಜುಗಳೂ ಆರಂಭವಾದುವು. ಇವಲ್ಲದೆ 7 ಖಾಸಗಿ ಶಿಕ್ಷಣಕೇಂದ್ರಗಳೂ 6 ಸಾರ್ವಜನಿಕ ಸಹಾಯ ಪಡೆಯುವ ವಿದ್ಯಾಕೇಂದ್ರಗಳೂ ಇವೆ, ಬೌಲ್ಡರ್‍ನ ಕಾಲೊರಾಡೋ ವಿಶ್ವವಿದ್ಯಾಲಯ (1877), ಕಲೊರಾಡೋ ಸರ್ಕಾರಿ ವ್ಯವಸಾಯ ವಿಶ್ವವಿದ್ಯಾಲಯ, ಫೋರ್ಟ್ ಲೂಯಿ ಕೃಷಿ ಮತ್ತು ತಾಂತ್ರಿಕ ಕಾಲೇಜು, ಡೆನ್ವರಿನ ಕಾಲೊರಾಡೋ ಮಹಿಳಾ ಕಾಲೇಜು ಮುಖ್ಯವಾದವು.

 ಇತಿಹಾಸ: ಕಾಲೊರಾಡೋ ಪ್ರದೇಶ ಹಂತಹಂತವಾಗಿ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಸೇರಿತು. ಆರ್ಕಾನ್ಸಾ ನದಿಯ ಉತ್ತರದ ಪ್ರದೇಶವನ್ನು 1803ರಲ್ಲಿ ಕೊಳ್ಳಲಾಯಿತು. 1819ರಲ್ಲಿ ಸ್ಟೇನಿನೊಂದಿಗೆ ಮಾಡಿಕೊಂಡ ಒಪ್ಪಂದದ ರೀತ್ಯಾ ಅದರ ಪಶ್ಚಿಮ ಗಡಿಯನ್ನು ನಿಷ್ಕರ್ಷಿಸಲಾಯಿತು. 1845ರಲ್ಲಿ ಟೆಕ್ಸಾಸ್ ಸಂಯುಕ್ತ ಸಂಸ್ಥಾನಕ್ಕೆ ಸೇರಿದಾಗ ಅದರ ಪಶ್ಚಿಮಗಡಿಯಲ್ಲಿ ಹೆಚ್ಚು ಪ್ರದೇಶ ಸೇರಿತು. ರೀಯೋಗ್ರಾಂಡ್ ಪಶ್ಚಿಮದ ಪ್ರದೇಶ 1848ರಲ್ಲಿ ಮೆಕ್ಸಿಕೋ ಸ್ವತಂತ್ರವಾದಾಗ ಅಮೆರಿಕಕ್ಕೆ ಸಿಕ್ಕಿತು.

 ಬಿಳಿಯ ವಲಸೆಗಾರರ ಪ್ರವೇಶವಾಗುವ ಮೊದಲು ಕಾಲೊರಾಡೋವಿನ ನೈಋತ್ಯ ಭಾಗದಲ್ಲಿ ಪ್ಯೂಬ್ಲೋ ಇಂಡಿಯನರು ವಾಸಿಸುತ್ತಿದ್ದರು. ಕ್ರಿ. ಪೂ. 500ರ ಸುಮಾರಿನ ಆ ಜನರ ಸಾಮೂಹಿಕ ವಸತಿಗಳ ಪ್ರೇಕ್ಷಣೀಯ ಅವಶೇಷಗಳನ್ನು ಮೆಸಾವೆರ್ಡೆ ರಾಷ್ಟ್ರೀಯ ಉದ್ಯಾನದಲ್ಲಿ ಈಗಲೂ ರಕ್ಷಿಸಿಡಲಾಗಿದೆ. ಬಿಳಿಯರು ಮೆಕ್ಸಿಕೋ ಪ್ರದೇಶಕ್ಕೆ ಬಂದಾಗ ಇಂಡಿಯನರ ಅಲೆಮಾರಿ ತಂಡಗಳು ಇಲ್ಲಿದ್ದುವು. ಇವರಲ್ಲಿ ಷೀಯೆನ್, ಅರಾಪಹೋ, ಮತ್ತು ಯೂಟೆ ಪಂಗಡದವರು ಪ್ರಮುಖರು.

 ಪ್ರಸಿದ್ಧವಾದ ಸಿಬೊಲಾದ ಏಳು ನಗರಗಳನ್ನು ಹುಡುಕುತ್ತ ಥ್ರಾನಿಸ್ಕೊ ಡಿ ಕಾರಾನಡೊ 1540-42ರಲ್ಲಿ ಕ್ಯಾನ್ಸಾಸ್ ವರೆಗೂ ಪರ್ಯಟನೆ ಮಾಡಿದಂತೆ ತಿಳಿದು ಬರುತ್ತದೆ. ಅವನ ಪ್ರಯತ್ನ ವಿಫಲವಾದ್ದರಿಂದ ಕೆಲಕಾಲ ಅನ್ನೇಷಣಕಾರ್ಯ ಮಂದಗಾಮಿಯಾಗಿತ್ತು. 1598ರಲ್ಲಿ ವಾಸ್ ಡಿ ಒನಾಟೆ ನ್ಯೂ ಮೆಕ್ಸಿಕೋದಲ್ಲಿ ವಸಾಹತು ಸ್ಥಾಪಿಸಿದಾಗ ಪುನಃ ಬಿಳಿಯರು ಇಲ್ಲಿಗೆ ಬರಲಾರಂಭಿಸಿದರು. 1796ರಲ್ಲಿ ವಾಸ್ ಡಿ ಉಲಿಬರ್ರಿ ಇಂಡಿಯನರನ್ನು ಅಟ್ಟಿಸಿಕೊಂಡು ಕಾಲೊರಾಡೋದ ಉತ್ತರ ಭಾಗಗಳಿಗೆ ಬಂದು, ಆ ಪ್ರದೇಶವನ್ನು ಸ್ಟೇನಿಗೆ ಸೇರಿಸಿಕೊಂಡ, ಉತ್ತರ ಕ್ಯಾಲಿಪೋರ್ನಿಯಕ್ಕೆ ಹೊಸ ಮಾರ್ಗ ಕಂಡುಹಿಡಿಯುವುದರಲ್ಲಿ ತೊಡಗಿದ್ದ ಒಂದು ತಂಡ 1777ರಲ್ಲಿ ಪಶ್ಚಿಮ ಕಾಲೊರಾಡೋ ಪ್ರದೇಶವನ್ನು ಅನ್ನೇಷಿಸಿತು. 1803ರಲ್ಲಿ ಅಮೆರಿಕದ ಜೇಮ್ಸ್ ಪರ್ಸೆಲ್ ತುಪ್ಪುಳ ವ್ಯಾಪಾರಕ್ಕಾಗಿ ಈ ಪ್ರದೇಶವನ್ನು ಪ್ರವೇಶಿಸಿದ. ಮೇಜರ್ ಲಾಂಗ್ ಸರ್ಕಾರದ ನಿಯೋಗವೊಂದರ ನಾಯಕನಾಗಿ 1820ರಲ್ಲಿ ಪ್ಲ್ಯಾಟ್ ನದಿ ಪ್ರದೇಶವನ್ನೂ ರಾಕೀ ಪರ್ವತಪ್ರದೇಶವನ್ನೂ ಶೋಧಿಸಿ ಆ ಪ್ರದೇಶವನ್ನು ಅಮೆರಿಕದ ದೊಡ್ಡ ಮರಳ್ಗಾಡೆಂದು ವರ್ಣಿಸಿದ. ಇನ್ನೂ ಕೆಲವು ಸರ್ಕಾರಿ ನಿಯೋಗಗಳು ಆ ಪ್ರದೇಶದ ಪರಿಶೋಧನೆ ನಡೆಸಿದುವು. ಆದರೆ ವ್ಯಾಪಾರಗಳ ಮತ್ತು ಲೋಹಾನ್ವೇಷಕರ ತಂಡಗಳು ಇಡೀ ಪ್ರದೇಶವನ್ನು ಸುತ್ತಾಡಿ ಅದನ್ನು ವಸತಿಗೆ ಯೋಗ್ಯವಾಗುವಂತೆ ಮಾಡಿದುವು. 1858ರಲ್ಲಿ ಚಿನ್ನದ ಗಣಿ ಉದ್ಯಮ ಪ್ರಾರಂಭವಾದಾಗ ಕಾಲೊರಾಡೋ ಪ್ರಸಿದ್ಧಿ ಪಡೆಯಿತು. ಮಿಸಿಸಿಪಿ ನದಿಯಾಚೆಯ ಇಡೀ ಪ್ರದೇಶವನ್ನು ಕ್ರಮೇಣ ಆರು ಪ್ರಾಂತ್ಯಗಳನ್ನಾಗಿ ವಿಂಗಡಿಸಲಾಯಿತು. 1830ರ ದಶಕದಲ್ಲಿ ನಾಲ್ಕು ವ್ಯಾಪಾರ ಕೋಠಿಗಳನ್ನು ಆ ಪ್ರದೇಶದಲ್ಲಿ ನಿರ್ಮಿಸಲಾಯಿತು. ಇವೇ ಕಾಲೊರಾಡೋದಲ್ಲಿ ಬಿಳಿಯರ ಪ್ರಥಮ ವಸಾಹತುಗಳು. 1846-47ರಲ್ಲಿ ಮಾರ್ಮನರು ಪ್ಯೂಬ್ಲೋದಲ್ಲಿ ತಾತ್ಕಾಲಿಕವಾಗಿ ನೆಲಸಿದರು. 1842-43 ಮತ್ತು 1845ರಲ್ಲಿ ಫ್ರಮಾಂಟ್ ಈ ಪ್ರದೇಶದಲ್ಲಿ ಸಂಚರಿಸಿ, ಇಲ್ಲಿಯ ಸ್ಥಿತಿಗಳನ್ನು ಯಥಾವತ್ತಾಗಿ ತಿಳಿಸಿದ. ಆ ಕಾಲದಲ್ಲಿ ಮೆಕ್ಸಿಕೋದ ಟಾವೊಸ್ ನಗರ ವ್ಯಾಪಾರಕೇಂದ್ರವಾಗಿತ್ತು. ಅನಂತರ ಬಿಳಿಯರಿಗೆ ಇಲ್ಲಿ ಭೂಸ್ವಾಮ್ಯ ನೀಡಲಾಯಿತು.

 1858ರಲ್ಲಿ ಜಾರ್ಜಿಯದ ಗ್ರೀನ್ ರಸೆಲನ ನೇತೃತ್ವದಲ್ಲಿ ಚಿನ್ನದ ಶೋಧನೆಗಾಗಿ ಒಂದು ಕಂಪನಿ ಇಲ್ಲಿಗೆ ಬಂತು. ಇನ್ನೂ ಹಲವಾರು ಚಿನ್ನವನ್ನು ಹುಡುಕುತ್ತ ಇಲ್ಲಿಗೆ ಬಂದರು. 1859ರ ಮೇ 6ರಂದು ಜಾನ್ ಎಚ್. ಗ್ರೆಗೊರಿ ಚಿನ್ನದ ಅದುರು ಇದ್ದ ಪ್ರದೇಶವನ್ನು ಕಂಡುಹಿಡಿದ. 1860-62ರ ಮಧ್ಯೆ ಹೆಚ್ಚು ಸಂಖ್ಯೆಯಲ್ಲಿ ವಲಸೆಗಾರರು ಬರಲಾರಂಭಿಸಿದರು. 1859ರಲ್ಲಿ ಡೆನ್ವರ್, ಬ್ಲಾಕ್ ಹಾಕ್, ಗೋಲ್ಡನ್, ಸೆಂಟ್ರಲ್ ಸಿಟಿ, ಮೌಂಟ್ ವರ್ನನ್ ಮತ್ತು ನೆವಾಡ ವಿಲೆ ನಗರಗಳ ಸ್ಥಾಪನೆಯಾಯಿತು.

 1858ರಲ್ಲಿ ಪೂರ್ವ ಕಾಲೊರಾಡೋ ಮತ್ತು ಕ್ಯಾನ್ಸಾಸ್‍ನ ಕೆಲವು ಭಾಗಗಳನ್ನೊಳಗೊಂಡ ಅರಾಪಹೋ ವಿಭಾಗ ಏರ್ಪಟ್ಟಿತು. ಆ ಪ್ರದೇಶದ ಪ್ರತಿನಿಧಿಯೊಬ್ಬ ಕಾಲೊರಾಡೋವನ್ನು ಪ್ರತ್ಯೇಕ ಪ್ರದೇಶವೆಂದು ಪರಿಗಣಿಸಬೇಕೆಂದು ವಾದಿಸಲು ಅಮೆರಿಕನ್ ಕಾಂಗ್ರೆಸಿಗೆ ತೆರಳಿದ. ಕಾಲೊರಾಡೋ ರಾಜ್ಯಸ್ಥಾಪನೆಯಾಗಬೇಕೆಂದು ಚಳವಳಿ ಪ್ರಾರಂಭವಾಯಿತು. ಆದರೆ ಇದಕ್ಕೆ ರಚಿಸಲಾದ ಸಂವಿಧಾನವನ್ನು ಜನ ತಿರಸ್ಕರಿಸಿದರು. ಪ್ರಾದೇಶಿಕ ಸರ್ಕಾರ ಸಂವಿಧಾನವನ್ನು ಅವರು ಅನಂತರ ಸ್ವೀಕರಿಸಿದರು. ಉ.ಅ. 37o-43o ಮತ್ತು ಪೂ.ರೇ. 102o-110o ನಡುವಣ ಈ ಪ್ರದೇಶವನ್ನು ಜೆಫರ್ಸನ್ ಎಂದು ಹೆಸರಿಸಲಾಯಿತು.

 ಅನಂತರ ಸ್ಥಳೀಯ ಗಣಿ ಉದ್ಯಮಗಳ ಮಾಲೀಕರ ಸಂಘ, ಜನತೆ ಸಂಘಗಳು ಮುಂತಾದ ಸಂಸ್ಥೆಗಳ ಒತ್ತಡದ ಪರಿಣಾಮವಾಗಿ 1861ರ ಫೆಬ್ರವರಿ 28ರಂದು ಕಾಲೊರಾಡೋ ಪ್ರದೇಶವನ್ನು ಅಮೆರಿಕನ್ ಕಾಂಗ್ರೆಸ್ ಸ್ಥಾಪಿಸಿತು. ವಿಲಿಯಂ ಗಿಲ್ಟಿನ್ ಮೊದಲ ಗವರ್ನರ್. ಇದನ್ನು 17 ಜಿಲ್ಲೆಗಳನ್ನಾಗಿ ವಿಭಾಗಿಸಲಾಯಿತು. ಮೊದಲ ರಾಜಧಾನಿ ಕಾಲೊರಾಡೋ ನಗರ. 1862ರಲ್ಲಿ ಆ ಗೌರವ ಗೋಲ್ಡನ್‍ಗೆ ಲಭ್ಯವಾಯಿತು. 1867ರಲ್ಲಿ ಡೆನ್ವರ್ ತಾತ್ಕಾಲಿಕ ರಾಜಧಾನಿಯಾಯಿತು. ಜನಮತಗಣಿಯ ಅನಂತರ 1881ರಲ್ಲಿ ಅದನ್ನೇ ಶಾಶ್ವತವಾದ ರಾಜಧಾನಿಯೆಂದು ಪರಿಗಣಿಸಲಾಯಿತು.

 1860ರ ದಶಕದಲ್ಲಿ ಕಾಲೊರಾಡೋದ ಅಭಿವೃದ್ಧಿ ನಿಧಾನವಾಗಿತ್ತು. ಅಮೆರಿಕದ ಅಂತರ್ಯುದ್ಧ, ಅನಂತರ ಟೆಕ್ಸಾಸ್ ಹೋರಾಟ, 1864-70ರ ನಡುವೆ ದೇಶೀಯ ಇಂಡಿಯನರೊಡನೆ ಕಲಹ-ಇವು ಅಭಿವೃದ್ಧಿಯನ್ನು ಕಂಠಿತಗೊಳಿಸಿದುವು. ಕೇಂದ್ರೀಯ ಪಡೆಗಳು 1864ರಲ್ಲಿ ಇಂಡಿಯನರ ಮೇಲೆ ಭೀಕರ ದಾಳಿ ನಡೆಸಿದುವು. ಸ್ಯಾಂಡ್ ಕ್ರೀಕ್ ಕಗ್ಗೊಲೆಯೆಂದು ಇಂದು ಕುಖ್ಯಾತಿ ಪಡೆದಿದೆ. ಕಾಲೊರಾಡೋ ಇತಿಹಾಸದಲ್ಲಿ ಇದೊಂದು ಕಪ್ಪು ಅಧ್ಯಾಯ. 1870ರ ದಶಕದಲ್ಲಿ ಇಂಡಿಯರನ್ನು ಬಗ್ಗು ಬಡಿದು, ಹೊಸವಿದಾನಗಳಿಂದ ಗಣಿ ಉದ್ಯಮವನ್ನು ಲಾಭಾದಾಯಕವನ್ನಾಗಿ ಮಾಡಿ, ರೈಲುಮಾರ್ಗಗಳನ್ನು ಸ್ಥಾಪಿಸಿ ಕೃಷಿ ಪದ್ಧತಿಯನ್ನು ಸುಧಾರಿಸಿ ಸರ್ವತೋಮುಖ ಪ್ರಗತಿಯನ್ನು ಸಾಧಿಸಲಾಯಿತು. ಕಾಲೊರಾಡೋವನ್ನು ಅಮೆರಿಕ ಸಂಯುಕ್ತಸಂಸ್ಥಾನದ ಒಕ್ಕೂಟಕ್ಕೆ ಸೇರಿಸುವ ಕರಡು ಮಸೂದೆಯನ್ನು 1867ರಲ್ಲಿ ರಿಪಬ್ಲಿಕನ್ ಪಕ್ಷ ತಯಾರಿಸಿದರೂ ಆಗಿನ ಅಧ್ಯಕ್ಷ ಆಂಡ್ರ್ಯೂ ಜಾಕ್ಸನ್ ಅದನ್ನು ತಳ್ಳಿಹಾಕಿದ. ಆನಂತರ ಕಾಂಗ್ರೆಸ್ಸಿನ ಅನುಮತಿ ಪಡೆದು 1875-76ರಲ್ಲಿ ಜನತೆಗೆ ಒಪ್ಪಿಗೆಯಾಗುವ ಸಂವಿಧಾನವನ್ನು ರೂಪಿಸಿ, 1876ರ ಜುಲೈ 1ರಂದು ಅದನ್ನು ಜಾರಿಗೆ ತರಲಾಯಿತು. ಆಗಸ್ಟ್ 1ರಂದು ರಾಜ್ಯವನ್ನು ಒಕ್ಕೂಟಕ್ಕೆ ಸೇರಿಸಿ ಕೊಂಡುದಾಗಿ ಘೋಷಿಸಲಾಯಿತು.

 ಅನಂತರ ಕಾಲದಲ್ಲಿ ರಾಜ್ಯದ ಇತಿಹಾಸ ಗಣಿ ಉದ್ಯಮದ ಇತಿಹಾಸದೊಂದಿಗೆ ಸೇರಿ ಹೋಗುತ್ತದೆ. 1893ರಲ್ಲಿ ಬೆಳ್ಳಿಯ ನಾಣ್ಯಪದ್ಧತಿಯನ್ನು ರದ್ದು ಪಡಿಸಲಾಗಿ ಅಶಾಂತಿಯೇರ್ಪಟ್ಟಿತು. ಆದರೆ 1891ರಲ್ಲಿ ಕ್ರಿಪಲ್ ಕ್ರೀಕ್ ಪ್ರದೇಶದಲ್ಲಿ ಚಿನ್ನದ ಶೋಧನೆಯಾದ್ದರಿಂದ ರಾಜ್ಯ ಪುನಃ ಪ್ರಗತಿ ಪಥದಲ್ಲಿ ಮುನ್ನಡೆಯಲು ಸಾಧ್ಯವಾಯಿತು. ಆ ಸುಮಾರಿನಲ್ಲಿ ಕೈಗಾರಿಕಾರಂಗದಲ್ಲೂ ಅಶಾಂತಿಯೇರ್ಪಟ್ಟಿತು. ಮಾಲೀಕ-ಕಾರ್ಮಿಕ ವಿರಸ ಉಗ್ರವಾಗಿತ್ತು. ರಾಜಕೀಯ ರಂಗದಲ್ಲಿ ಇದರ ದೆಸೆಯಿಂದ ಪಾಪ್ಯು ಲಿಸ್ಟ್-ಡೆಮೊಕ್ರಾಟಿಕ್ ಸಂಯುಕ್ತ ಪಕ್ಷ ಪ್ರಾಬಲ್ಯಗಳಿಸಿ ಮೂರು ಚುನಾವಣೆಗಳಲ್ಲಿ ಜಯಗಳಿಸಿತು. 20ನೆಯ ಶತಮಾನದ ಮೊದಲರ್ಧ ಭಾಗದಲ್ಲಿ ರಿಪಬ್ಲಿಕನ್ ಮತ್ತು ಡೆಮೊಕ್ರಾಟಿಕ್ ಪಕ್ಷಗಳು ಸಮಸಮವಾಗಿ ಪ್ರಾಬಲ್ಯ ಗಳಿಸಿದುವು. 1899ರಲ್ಲಿ ಅಲ್ಲಿಯ ಜನ ನೀರಾವರಿಯ ಸಹಾಯದಿಂದ ಸಕ್ಕರಬೀಟ್ ಬೆಳೆಯಲು ಆರಂಭಿಸಿದರು. ಅದು ಪ್ರಮುಖ ಬೆಳೆಯಾಯಿತು. ಅನಂತರ ಕಾಲದಲ್ಲಿ ಮೋಟರ್ ವಾಹನಗಳು ಹೆಚ್ಚು ಬಳಕೆಗೆ ಬಂದುದರಿಂದ ಸಾಮಾಜಿಕ-ಆರ್ಥಿಕ ರಂಗಗಳಲ್ಲಿ ಅನೇಕ ಬದಲಾವಣೆಗಳಾದುವು. ಕಾರ್ಖಾನೆಗಳ ಉತ್ಪನ್ನ, ವ್ಯಾಪಾರ ಮತ್ತು ವೃತ್ತಿಗಳು ಬಹುಮುಖವಾಗಿ ಬೆಳೆದುವು. 20ನೆಯ ಶತಮಾನದ ಮಧ್ಯ ಭಾಗದಲ್ಲಿ ಅಭಿವೃದ್ಧಿಯ ಫಲವಾಗಿ ಜನತೆಯ ಮತ್ತು ಸರ್ಕಾರದ ಸಂಪನ್ಮೂಲಗಳು ಬಹುಪಾಲು ಹೆಚ್ಚಿದುವು.

 ಆಡಳಿತ : 1876ರ ಕಾಲೊರಾಡೋ ಸಂವಿಧಾನದ ಪ್ರಕಾರ ಸರ್ಕಾರದಲ್ಲಿ ಕಾರ್ಯಾಂಗ, ಶಾಸಕಾಂತ ಮತ್ತು ನ್ಯಾಯಾಂಗಗಳೆಂಬ ಮೂರು ವಿಭಾಗಗಳಿವೆ. ಗವರ್ನರ್, ಲೆಫ್ಟಿನೆಂಟ್ ಗವರ್ನರ್, ಸೆಕ್ರೆಟರಿ ಆಫ್, ಸ್ಟೇಟ್, ಕೋಶಾಧಿಕಾರಿ. ಲೆಕ್ಕಶೋಧಕ ಮತ್ತು ಅಟಾರ್ನಿ ಜನರಲ್ ಇವರು ಕಾರ್ಯಾಂಗದ ಪ್ರಮುಖ ಅಧಿಕಾರಿಗಳು. ಎರಡು ವರ್ಷಕ್ಕೊಮ್ಮೆ ಚುನಾಯಿತರಾಗುತ್ತಿದ್ದ ಇವರ ಅಧಿಕಾರಾವಧಿಯನ್ನು 1959ರ ಸಂವಿಧಾನ ತಿದ್ದುಪಡಿಯ ರೀತ್ಯಾ ನಾಲ್ಕು ವರ್ಷಗಳಿಗೆ ಏರಿಸಲಾಗಿದೆ. ವಿದ್ಯಾಶಾಖೆಯ ಮೇಲ್ವಿಚಾರಕರೂ ಮೊದಲು ಚುನಾಯಿತ ಅಧಿಕಾರಿಯಾಗಿದ್ದರು. ಆದರೆ 1948ರ ಸಂವಿಧಾನ ತಿದ್ದುಪಡಿಯ ಪ್ರಕಾರ ಐವರು ಚುನಾಯಿತ ಸದಸ್ಯರ ಸಮಿತಿಯೊಂದು ರಾಜಕೀಯದಲ್ಲಿ ಆಸಕ್ತಿಯಿಲ್ಲದ ವ್ಯಕ್ತಿಯೊಬ್ಬನನ್ನು ಆ ಹುದ್ದೆಗೆ ನೇಮಿಸುತ್ತದೆ.

 ಶಾಸಕಾಂಗದಲ್ಲಿ ಎರಡು ಸಭೆಗಳಿವೆ-35 ಮಂದಿ ಸದಸ್ಯರಿಂದ ಕೂಡಿದ 'ಸೆನೆಟ್' ಮತ್ತು 65 ಸದಸ್ಯರ ಪ್ರಜಾಪ್ರತಿನಿಧಿಸಭೆ. 1951ರ ವರೆಗೆ 2 ವರ್ಷಗಳಿಗೊಮ್ಮೆ ಸಂಧಿಗುತ್ತಿದ್ದ ಶಾಸನಸಭೆ ಅನಂತರ ವರ್ಷಕ್ಕೊಮ್ಮೆ ಸಂಧಿಸಲಾರಂಭಿಸಿತು. ಮಹಿಳೆಯರಿಗೆ ಮತದಾನವನ್ನು 1893ರಲ್ಲಿ ನೀಡಲಾಯಿತು. 1910ರಲ್ಲಿ ಸಂವಿಧಾನವನ್ನು ತಿದ್ದುಪಡಿ ಮಾಡಿ ಪ್ರಜೆಗಳು ಸ್ವತಃ ಅಥವಾ ಜನಾಭಿಪ್ರಾಯ ಸಂಗ್ರಹಕಾಲದಲ್ಲಿ ಪ್ರಮುಖ ರಾಜಕೀಯ ವಿಚಾರಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸೌಲಭ್ಯ ನೀಡಲಾಯಿತು.

 ನ್ಯಾಯಾಂಗದಲ್ಲಿ 7 ಮಂದಿ ನ್ಯಾಯಾಧೀಶರಿರುವ ಸರ್ವೋನ್ನತ ನ್ಯಾಯಾಲಯ, ಜಿಲ್ಲಾ ನ್ಯಾಯಾಲಯಗಳು ಮತ್ತು ನ್ಯಾಯಪತಿಗಳ ಕೋರ್ಟುಗಳು ಇವೆ. ಸರ್ವೋನ್ನತ ನ್ಯಾಯಾಲಯದ ನ್ಯಾಯಾಧೀಶರನ್ನು ಒಂದೊಂದು ಬಾರಿಗೆ ಕೆಲವರಂತೆ ಚುನಾಯಿಸಲಾಗುತ್ತದೆ. ಅವರ ಅಧಿಕಾರಾವಧಿ 10 ವರ್ಷಗಳು. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ